Rajkumar_Films

Thursday 19 May 2011

ಹುಲ್ಲಿನ ಬುಟ್ಟಿಯಲ್ಲಿ ಸಿಡಿ ಹುದುಗಿಟ್ಟ 'ಕಿರಾತಕ'!

PR
ಶ್ರೀರಂಗಪಟ್ನ...ರಂಗತಿಟ್ಟು...ಪಾಂಡವಪುರ....ಕುಂತಿಬೆಟ್ಟ... ಹೀಗೆ ಆರಂಭವಾಗುವ 'ಕಿರಾತಕ' ಚಿತ್ರದ ಈ ಹಾಡಿನಲ್ಲಿ ಮಂಡ್ಯ ಜಿಲ್ಲೆಯ ನೂರು ಹಳ್ಳಿಗಳ ಹೆಸರಿವೆ. ಈ ಮಂಡ್ಯ ನಂಟಿನ ಕಾರಣವೋ ಏನೋ ಚಿತ್ರದ ಹಾಡುಗಳ ಧ್ವನಿ ಮುದ್ರಿಕೆ ಬಿಡುಗಡೆಗೆ ನಿರ್ದೇಶಕ ಪ್ರದೀಪ್ ರಾಜು ಅಂಬರೀಷ್ ಅವರನ್ನು ಆಹ್ವಾನಿಸಿದ್ದರು. ಬುಟ್ಟಿಯಲ್ಲಿ ತುಂಬಿದ್ದ ಹುಲ್ಲಿನ ನಡುವೆ ಹುದುಗಿದ್ದ ಸಿಡಿಗಳನ್ನು ಹೆಕ್ಕಿ ಕ್ಯಾಮರಾಕ್ಕೆ ತೋರಿಸಿದ ಅಂಬರೀಷ್ ತನ್ನೂರಿನ ಸೊಗಡನ್ನು ಬಿತ್ತರಿಸುವ ಹಾಡುಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು.

'ಲೊಕೇಶನ್ ಹುಡುಕಲು ಮಂಡ್ಯ ಜಿಲ್ಲೆ ಸುತ್ತಾಡಿದ ನಿದೇಶಕರು ಕೊನೆಗೆ ಆ ಹಳ್ಳಿಗಳ ಹೆಸರುಗಳನ್ನೇ ಸೇರಿಸಿ ಈ ಹಾಡು ಬರೆದರು' ಎಂದು ಹಾಡು ಹುಟ್ಟಿದ ಬಗೆಯನ್ನು ಸಂಗೀತ ನಿರ್ದೇಶಕ ವಿ. ಮನೋಹರ್ ವಿವರಿಸಿದರು.

'ಒಂದೊಂದು ಕಾಲದಲ್ಲೂ ಒಂದೊಂದು ರೀತಿಯ ಚಿತ್ರಗಳು ಜನರಿಗೆ ಇಷ್ಟವಾಗುತ್ತವೆ. ಹಳ್ಳಿಯ ಸಾಂಸ್ಕ್ಕತಿಕ ಪರಿಸರ ಕಟ್ಟಿಕೊಡಲು ಹೊರಟಿರುವ ಈ ಚಿತ್ರ ನನಗೆ ವಿಶಿಷ್ಟ ಅನುಭವ ನೀಡಿತು' ಎಂದರು ಚಿತ್ರದಲ್ಲಿ ನಟಿಸಿರುವ ನಿರ್ದೇಶಕ ನಾಗಾಭರಣ.

ನಟಿ ತಾರಾ 'ಕಿರಾತಕ' ಚಿತ್ರದ ಪಾತ್ರವೊಂದರಲ್ಲಿ ನಟಿಸಿದ್ದಾರೆ. ನಾಗಾಭರಣ ಅವರೊಂದಿಗೆ ಕೆಲಸ ಮಾಡಿದ ಖುಷಿಯನ್ನು ಹಂಚಿಕೊಂಡ ಅವರು 'ನಟನೆಯ ಭರದಲ್ಲಿ ಅವರು ನಿಜವಾಗಿಯೂ ನನಗೆ ತಪರಾಕಿ ಭಾರಿಸಿದರು' ಎಂದರು. 'ಕಿರಾತಕ' ತಮಿಳಿನ 'ಕಲಾಮಣಿ' ಚಿತ್ರದ ರೀಮೇಕ್ ಚಿತ್ರವಾದರೂ, ಸಂಗೀತ ನಿರ್ದೇಶಕ ವಿ. ಮನೋಹರ್ ಅವರು ಸ್ವಂತಿಕೆಯ ಗೀತ ರಚನೆ ಮಾಡಿದ್ದಾರೆ ಎಂದು ತಾರಾ ಶ್ಲಾಘಿಸಿದರು.

ಮಂಡ್ಯದಲ್ಲಿ ತುಂಟ ಹುಡುಗರನ್ನು ಕಿರಾತಕ ಎಂದು ಕರೆಯುವುದು ನಿರ್ದೇಶಕ ಪ್ರದೀಪ್ ರಾಜು ಅವರಿಗೆ ಇಷ್ಟವಾಗಿ ಚಿತ್ರಕ್ಕೆ ಅದೇ ಹೆಸರಿಟ್ಟರಂತೆ. ಅದರಂತೆ ನಾಯಕ ನಾಯಕಿ ಇಬ್ಬರೂ ಮಂಡ್ಯ ಭಾಗದ ಹಳ್ಳಿಯವರನ್ನು ಹೋಲುತ್ತಾರೆ ಎಂಬುದು ಅವರ ಮೆಚ್ಚುಗೆಯ ಮಾತು.

'ನಾನು ಅಂಬರೀಷ್ ಅಭಿಮಾನಿ. ಮನೆಯಲ್ಲಿ ಮಾತನಾಡುವ ಮಂಡ್ಯ ಶೈಲಿಯ ಕನ್ನಡವನ್ನೇ ನುಡಿದಿದ್ದೇನೆ. ಚಿತ್ರದಲ್ಲಿ ಪಕ್ಕಾ ಜಾನಪದ ಮತ್ತು ಮಂಡ್ಯದ ಸೊಗಡಿದೆ' ಎಂದರು ನಾಯಕ ಯಶ್.

ನಾಯಕಿ ಓವಿಯಾಗೆ ತಮಿಳಿನ 'ಕಲಾಮಣಿ' ಚಿತ್ರದಲ್ಲೂ ನಾಯಕಿಯಾಗಿ ನಟಿಸಿರುವ ಕಾರಣ ಈ ಚಿತ್ರದ ನಟನೆ ಕಷ್ಟವಾಗಲಿಲ್ಲವಂತೆ. ಈ ಚಿತ್ರದಲ್ಲಿ ಹತ್ತನೇ ತರಗತಿ ಓದುವ ಹಳ್ಳಿ ಹುಡುಗಿಯ ಪಾತ್ರ ಓವಿಯಾ ಅವರದು.

No comments:

Post a Comment