Rajkumar_Films

Thursday 19 May 2011

ಅಮೂಲ್ಯಗಿನ್ನು 'ಮನಸಾಲಜಿ' ಎಕ್ಸಾಮ್!

PR
ಇತ್ತೀಚೆಗಷ್ಟೇ ಪಿಯುಸಿ ಪರೀಕ್ಷೆಯಲ್ಲಿ ಪಾಸಾಗಿರುವ ಅಮೂಲ್ಯ ಅಭಿನಯದ ಚಿತ್ರ 'ಮನಸಾಲಜಿ' ಜೂನ್‌ನಲ್ಲಿ ಬಿಡುಗಡೆಯಾಗಲಿದೆ. ಬಾಲನಟಿಯಾಗಿ ಬಣ್ಣ ಹಚ್ಚಿ ಚಿತ್ರರಂಗಕ್ಕೆ ಪ್ರವೇಶ ಪಡೆದಿದ್ದ ಅಮೂಲ್ಯ ಪೂರ್ಣ ಪ್ರಮಾಣದ ನಾಯಕಿಯಾಗಿ ಐದು ಸಿನಿಮಾಗಳಲ್ಲಿ ನಟಿಸಿದ್ದಾರೆ.

'ಮನಸಾಲಜಿ' ಚಿತ್ರವನ್ನು ಈಕೆಯ ಅಣ್ಣ ದೀಪಕ್ ಅರಸ್ ನಿರ್ಮಿಸಿ ನಿರ್ದೇಶಿಸಿದ್ದು, ಬೆಂಗಳೂರಿನ ರಾಜಾಜಿನಗರದ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಭವ್ಯವಾದ ಅಭಿಮಾನಿ ವಸತಿ ಸಭಾಂಗಣದಲ್ಲಿ ಚಿತ್ರದ ಹಾಡುಗಳ ಸಿಡಿ ಬಿಡುಗಡೆ ಸಮಾರಂಭ ಜರುಗಿತು. ಹಾಡುಗಳ ಸಿಡಿಗೆ ಲಾಕಿಂಗ್ ಸಿಸ್ಟಮ್ ಅಳವಡಿಸಲಾಗಿದ್ದು ಹೀಗೆ ಮಾಡಿರುವುದರಿಂದ ನಕಲಿ ಸಿಡಿ ತಯಾರಿಸಲು ಸಾಧ್ಯವಾಗುವುದಿಲ್ಲ.

ಕಾರ್ಡಿಯಾಲಜಿ, ಸೈಕಾಲಜಿ, ನ್ಯೂರಾಲಜಿ ಇವೆಲ್ಲ ರೋಗ ನಿರ್ಧಾರಕ ವಿದ್ಯೆಯ ಹೆಸರುಗಳು. ಮನಸಾಲಜಿ ಅಂದರೆ? ಇದು ಮನಸ್ಸಿನ ಏರಿಳಿತ, ನೋವು ನಲಿವುಗಳನ್ನುಅಳತೆ ಮಾಡುವ ವಿದ್ಯೆಯಂತೆ! ಹಾಲಿಡೇ ಹೀರೋಯಿನ್ ಎಂದೇ ಹೆಸರಾಗಿರುವ ಅಮೂಲ್ಯ, ಶ್ರೇಷ್ಠ ಕಲಾವಿದೆಯಾಗಿ ರೂಪುಗೊಳ್ಳುತ್ತಿರುವ ಬೆಡಗಿ. ಸದ್ಯದಲ್ಲೇ ಈಕೆ ದಿವಂಗತ ನಟಿ ಸೌಂದರ್ಯಳಷ್ಟೇ ಖ್ಯಾತಿ ಪಡೆಯುತ್ತಾಳೆ ಎಂಬ ಮಾತನ್ನು ಗಾಂಧಿನಗರದಲ್ಲಿ ಉದ್ದೇಶಪೂರ್ವಕವಾಗಿಯೇ ತೇಲಿಬಿಡಲಾಗಿದೆ. ಈಕೆ ಕನ್ನಡ ಚಿತ್ರರಂಗದ ಅಮೂಲ್ಯ ರತ್ನ ಎಂಬ ಉತ್ಪ್ತ್ರೇಕ್ಷಿತ ಮಾತೂ ಕೇಳಿ ಬರುತ್ತಿದೆ.

ಸಿಡಿ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಆಕರ್ಷಣೆಯಾಗಿದ್ದ ಅಮೂಲ್ಯ, ಪ್ರೌಢಿಮೆಯಿಂದ ಮಾತನಾಡಿ ತಾನು ಚಿಕ್ಕ ಹುಡುಗಿಯಲ್ಲ ಎಂದು ಸಾಬೀತು ಪಡಿಸಿದರು. ಚಿತ್ರಕಥೆಯೇ ಈ ಚಿತ್ರದ ಬಂಡವಾಳ ಎಂದು ಹೇಳಿದ ಅಮೂಲ್ಯ 'ನಾನು ವಯೊಲಿನ್ ವಿದ್ಯಾರ್ಥಿನಿಯಾಗಿ ನಟಿಸಿದ್ದು ನನ್ನದು ಸುಂದರವಾದ ಪರಿಪಕ್ವ ಪಾತ್ರ' ಎಂದರು.

ಪಬ್ಲಿಕ್ ಕಾಯಿನ್ ಬೂತ್‌ನಿಂದ ತನ್ನ ಪ್ರೇಮಿಗೆ ಕರೆ ಮಾಡಲು ಒಂದು ರೂಪಾಯಿ ನಾಣ್ಯವೂ ಇಲ್ಲದೆ ಪರದಾಡುತ್ತಿದ್ದ ವ್ಯಕ್ತಿಯೊಬ್ಬನ ಮಾಮೂಲಿ ಘಟನೆ 'ಮನಸಾಲಜಿ' ಚಿತ್ರದ ಕಥೆಗೆ ಸ್ಪೂರ್ತಿ ಆಯಿತು ಎಂದು ನಿರ್ದೇಶಕ ದೀಪಕ್ ಅರಸ್ ಹೇಳಿದರು.

ಘಟನೆ ಕೂದಲೆಳೆಯಷ್ಟಾದರೂ ಸಿನಿಮಾಕ್ಕೆ ಮಾತ್ರ ಇದು ನೈಜ ಕಥೆ ಆಧಾರಿತ ಚಿತ್ರ ಎಂಬ ಹಣೆಪಟ್ಟಿ ಬರಲು ಸಬೂಬಾಗಿದೆ. 'ಮನಸಾಲಜಿ'ಯ ನಿರ್ಮಾಪಕ- ನಿರ್ದೇಶಕ ದೀಪಕ್ ಅರಸ್‌ಗೆ ಹಾಗೂ ನಾಯಕ ರಾಕೇಶ್‌ಗೆ ಇದು ಮೊಟ್ಟ ಮೊದಲ ಚಿತ್ರ.

ಚಿತ್ರದಲ್ಲಿ ಐದು ಹಾಡುಗಳಿದ್ದು ಅವುಗಳನ್ನು ರವೀಂದ್ರ ಸಿರಗಾವಿ, ರಿತಿಶಾ, ಹರ್ಷ, ಅಪೂರ್ವ, ಎಂ.ಡಿ.ಪಲ್ಲವಿ ಹೀಗೆ ಅಚ್ಚ ಕನ್ನಡಿಗರೇ ಹಾಡಿದ್ದಾರೆ. ಅಶೋಕ್ ಮದ್ದೂರು ಎಂಬವರು ಮೊದಲ ಬಾರಿಗೆ ಗೀತ ರಚನೆ ಮಾಡಿದ್ದು ಚಿತ್ರದ ಸಂಭಾಷಣೆಯನ್ನೂ ಬರೆದಿದ್ದಾರೆ.

ಚಿತ್ರಕ್ಕೆ ಸಂಗೀತ ನೀಡಿದ ಅನೂಪ್ ಸೀಳೀನ್ ಮತ್ತು ಸಂಗಡಿಗರು 'ಮನಸಾಲಜಿ' ಚಿತ್ರದ ಗೀತೆಗಳ ತುಣುಕುಗಳನ್ನು ಹಾಡಿದರು. ಛಾಯಾಗ್ರಾಹಕ ಜ್ಞಾನಮೂರ್ತಿ ಅವರು 'ಮನಸಾಲಜಿ' ಸಕ್ಸಸ್ ಆಗುವುದು ಶತಃಸಿದ್ಧ ಎಂದು ಬರೆದು ಬಿಟ್ಟಿದ್ದಾರಂತೆ. ನೃತ್ಯ ನಿರ್ದೇಶಕ ಮುರಳಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು.

No comments:

Post a Comment